ಗ್ರನಾಡ -
ದಕ್ಷಿಣ ಸ್ಪೇನಿನ ಪ್ರದೇಶದ ಒಂದು ನಗರ. ಅದೇ ಹೆಸರಿನ ಪ್ರಾಂತ್ಯದ ಮುಖ್ಯ ಪಟ್ಟಣ. ಮ್ಯಾಡ್ರಿಡ್ ನಗರದ ದಕ್ಷಿಣಕ್ಕೆ 225 ಮೈ. ದೂರದಲ್ಲಿದೆ. ಜನಸಂಖ್ಯೆ 1,60,000 . ನಗರ ಸಮುದ್ರಮಟ್ಟದಿಂದ 2,195' ಎತ್ತರದಲ್ಲಿದೆ. ಸೈರಾ ನೆವೇಡ ಪರ್ವತಶೇಣಿಯ ವಾಯುವ್ಯಭಾಗದಲ್ಲಿ ಹೆನಿಲ್ ಮತ್ತು ದರೋ ನದಿಗಳ ಸಂಗಮಸ್ಥಾನವಿದು. ಗ್ರನಾಡದ ಮೂಲಕ ಹರಿಯುವ ದಾರೋ ನದಿಯ ಬಲಗಡೆ ಹಳೆಯ ನಗರ ಇದೆ. ಇಲ್ಲಿ ಮೋರ್ ಜನಾಂಗದವರ ಹಳೆಯ ಕಟ್ಟಡಗಳೂ ಕಿರಿದಾದ ತಿರುವುಮುರುವಿರುವ ಬೀದಿಗಳೂ ಸಣ್ಣ ಸಣ್ಣ ಚೌಕಗಳೂ ಇವೆ. ಗ್ರನಾಡ ಉತ್ತರದ ಕಡೆಯಲ್ಲಿ ವಿಸ್ತರಿಸಿದೆ. ಆಧುನಿಕ ಕಟ್ಟಡಗಳು ತಲೆಯೆತ್ತಿವೆ. ಆಹಾರ ಪದಾರ್ಥಗಳ ತಯಾರಿಕೆ, ಸಕ್ಕರೆ ಪರಿಷ್ಕರಣ - ಇವು ಇಲ್ಲಿಯ ಮುಖ್ಯ ಉದ್ಯಮಗಳು. 
ಗ್ರನಾಡ ನಗರದಲ್ಲಿ ಅನೇಕ ಭವ್ಯ ಕಟ್ಟಡಗಳುಂಟು. ಇವುಗಳಲ್ಲಿ ಬಹಳ ಮುಖ್ಯವಾದ್ದು ಕಥೆಡ್ರಲ್ ಕಟ್ಟಡ. ಇದು 1529-1703 ರಲ್ಲಿ ಪುನರುಜ್ಜೀವನ ಶೈಲಿಯಲ್ಲಿ ನಿರ್ಮಿತವಾಯಿತು. ಸ್ಪೆನಿನ ಖ್ಯಾತ ಕಲಾವಿದರ ಚಿತ್ರಕೃತಿಗಳು ಈ ಕಟ್ಟಡದಲ್ಲಿವೆ. ಕಥೆಡ್ರಲ್ ಬಳಕೆಯಲ್ಲೇ ಇರುವ ಚಾಪೆಲ್‍ನಲ್ಲಿ ಅರಸರ ಗೋರಿಗಳಿವೆ. ಅಪೂರ್ಣವಾಗಿರುವ 5 ನೆಯ ಚಾಲ್ರ್ಸ್ ಅರಮನೆ, ವಿಶ್ವವಿದ್ಯಾಲಯ, ಇಂಪೀರಿಯಲ್ ಕಾಲೇಜು, ಸೇಂಟ್ ಆನ್ ಮತು ಸ್ಯಾನ್ ಸಾಲ್ವಡಾರ್ ಚರ್ಚುಗಳು, ಸೇಂಟ್ ಎಲಿಜûಬೆತ್ ಕಾನ್ವೆಂಟ್ - ಇವು ಇತರ ಭವ್ಯಕಟ್ಟಡಗಳ ಪೈಕಿ ಕೆಲವು. ಐತಿಹಾಸಿಕ ಮಹತ್ತ್ವದ್ದೂ ಬಹು ಪ್ರಮುಖವೂ ಆದ ಸ್ಮಾರಕ ಅಲ್‍ಹಾಂಬ್ರ, ಕೆಂಪಿಟ್ಟಿಗೆಗಳನ್ನು ಉಪಯೋಗಿಸಿ ಮೋರ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾದ ಕಟ್ಟಡಗಳ ಸಮೂಹ ಇದು. ಈ ಕಟ್ಟಡಗಳ ನಿರ್ಮಾಣ 1 ನೆಯ ಮಹಮ್ಮದನ ಕಾಲದಲ್ಲಿ ಆರಂಭಗೊಂಡು, 1 ನೆಯ ಯೂಸಫನ ಕಾಲದಲ್ಲಿ ಪೂರ್ಣಗೊಂಡುವು. ಅಲಂಕಾರ ಪಟ್ಟಿಕೆಗಳೂ ಚಿತ್ರ ವಿಚಿತ್ರ ಅಲಂಕಾರಗಳೂ ಬರೆಹಗಳೂ ಇಲ್ಲಿ ಕಾಂಡುಬರುತ್ತವೆ. ಅಲ್‍ಹಾಂಬ್ರದ ಎರಡು ವಿಭಾಗಗಳಲ್ಲಿ ಒಂದು ರಾಜರ ಮತ್ತು ರಾಜವಂಶದವರ ವಾಸಕ್ಕೂ ಮತ್ತೊಂದು ಅಧಿಕಾರಿಗಳಿಗೂ ಸಭಾಸದರಿಗೂ ಮೀಸಲಾಗಿದ್ದುವು. ಅಲ್‍ಹಾಂಬ್ರದ ಪೊಮಿಗ್ರೇನೇಟ್ಸ್ ದ್ವಾರ, ರಾಯಭಾರಿಗಳ ಹಜಾರ, ಸಿಂಹಗಳ ಮೊಗಸಾಲೆ, ಮರ್ಟಲ್ ಪೊದರು ಸಸ್ಯಗಳ ಮೊಗಸಾಲೆ - ಇವೂ ಆಕರ್ಷಕವಾಗಿವೆ.

ಪ್ರಾಚೀನ ನಗರವಾದ ಇಲಿಬೆರೀಸಿನ ಪಾಳು ಪ್ರದೇಶದ ಬಳಿ ಗ್ರನಾಡವನ್ನು 7 ನೆಯ ಶತಮಾನದಲ್ಲಿ ಸ್ಥಾಪಿಸಲಾಯಿತು. 8ನೆಯ ಶತಮಾನದಲ್ಲಿ ಈ ಪ್ರದೇಶ ಮೋರರ ವಶವಾಯಿತು. 1015 ರವರೆಗೂ ಇದು ಉಮಾಯದ್ ಖಲೀಫರ ಆಳ್ವಿಕೆಗೊಳಪಟ್ಟಿತ್ತು. ಅನಂತರ ಆಲ್ಮೊರಾವಿಡರ ವಶಕ್ಕೆ ಬಂತು (1157). ಆಮೇಲೆ ನಾಸ್ರಿಡ್‍ಗಳ ಕೈಗೆ ಬಂದು (1238) ಸ್ವತಂತ್ರ ರಾಜ್ಯವೊಂದರ ರಾಜಧಾನಿಯಾಯಿತು. ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ ಇದು ಅವರ ಸಂಸ್ಕøತಿ ಮತ್ತು ನಾಗರಿಕತೆಗಳ ಕೇಂದ್ರ ಸ್ಥಾನವಾಗಿತ್ತು. ಇಬ್ನ್ ಖಾಲ್ದೂನ್ (1332 -1406), ಇಬ್ನ್ ಬತೂತ (1304-1368) ಮುಂತಾದ ಖ್ಯಾತ ಇತಿಹಾಸಕಾರರು ಗ್ರನಾಡದ ಸಂಸ್ಕøತಿಗಳಿಂದ ಆಕರ್ಷಿತರಾಗಿದ್ದರು. 1492 ರಲ್ಲಿ ಫರ್ಡಿನೆಂಡ್ ದೊರೆ ಇದನ್ನು ಗೆದ್ದು ಮೋರರ ಆಳ್ವಿಕೆಯನ್ನು ಕೊನೆಗಾಣಿಸಿ, ಗ್ರನಾಡವನ್ನು ಸ್ಪೇನಿನೊಡನೆ ಸೇರಿಸಿದ. ಆಗ ಗ್ರನಾಡದ ಅವನತಿ ಆರಂಭವಾಯಿತು. ಸ್ಪೇನಿನವರ ದಾಳಿಯ ಫಲವಾಗಿ ಅಲ್‍ಹಾಂಬ್ರದ ಸೌಂದರ್ಯ ಕುಂಠಿತವಾಯಿತು. 1812 ರ ಫ್ರೆಂಚ್ ದಾಳಿಯೂ 1821 ರಲ್ಲಿ ಸಂಭವಿಸಿದ ಒಂದು ಭೂಕಂಪವೂ ಇದರ ಹಲವು ಭಾಗಗಳನ್ನು ನಾಶಗೊಳಿಸಿದುವು. ಅಲ್‍ಹಾಂಬ್ರದ ಪುನರ್‍ನಿರ್ಮಾಣ ಕಾರ್ಯ 1828 ರಲ್ಲಿ ಪ್ರಾರಂಭವಾಯಿತು. ಅದರ ಹಿಂದಿನ ಮೌಲ್ಯಗಳ ಪುನ:ಸ್ಥಾಪನೆಯ ಪ್ರಯತ್ನಗಳು ನಡೆದಿವೆ. 

ಗ್ರನಾಡ ಪ್ರಾಂತ್ಯ: ಆಂಡಾಲೂಸಿಯಕ್ಕೆ ಸೇರಿದ ಜಿಲ್ಲೆಗಳನ್ನು ಒಟ್ಟುಗೂಡಿಸಿ 1833ರಲ್ಲಿ ಗ್ರನಾಡ ಪ್ರಾಂತ್ಯವನ್ನು ರಚಿಸಲಾಯಿತು. ವಿಸ್ತೀರ್ಣ 4.838 ಚ. ಮೈ. ಜನಸಂಖ್ಯೆ 8,28,525 (1960). ಈ ಪ್ರಾಂತ್ಯದ ಉತ್ತರಕ್ಕೆ ಕಾರ್ಡೊಬ, ಹಾಯೇನ್ ಮತ್ತು ಆಲ್ವಾಥೇಟಗಳೂ ಪೂರ್ವಕ್ಕೆ ಮರ್ಸಿಯ ಮತ್ತು ಅಲ್ಮೇರಿಯಗಳೂ ದಕ್ಷಿಣಕ್ಕೆ ಮೆಡಿಟರೇನಿಯನ್ ಸಮುದ್ರವೂ ಪಶ್ಚಿಮಕ್ಕೆ ಮ್ಯಾಲಗವೂ ಇವೆ. ಪಶ್ಚಿಮ ಹಾಗೂ ವಾಯುವ್ಯ ಭಾಗಗಳಲ್ಲಿ ಸ್ಯೆರಾ ನೆವೇಡ ಪರ್ವತಶ್ರೇಣಿ ಇದೆ. ಇಲ್ಲಿಯ ನೆಲ ಫಲವತ್ತಾದ್ದು. ಹಲವೆಡೆ ಕಬ್ಬಿನ ಗದ್ದೆಗಳಿವೆ. ಕುರಿಸಾಕಣೆಯೂ ಉಂಟು.
(ಕೆ.ಎಸ್.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ